ಯಾದವ ನೀ ಬಾ ಯದುಕುಲ ನಂದನ
ರಾಗ: ಜುಲಾಪ್,        ತಾಳ: ಅಟ್ಟ;
ಯಾದವ ನೀ ಬಾ ಯದುಕುಲ ನಂದನ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೊ      ||ಪ||

ಸೋದರಮಾವನ ಮಧುರೆಲಿ ಮಡುಹಿದ ಯ-
ಶೋದೆ ನಂದನ ನೀ ಬಾರೊ         || ೧ ||

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲ್ ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ      || ೨ ||

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೊ
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೊ       || ೩ ||

ಖಗವಾಹನನೆ ಬಗೆಬಗೆಯಿಂದಲಿ
ನಗೆಮೊಗದರಸನೆ ನೀ ಬಾರೊ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೊ        || ೪ ||ದಾಸವಾಣಿ
ರಚನೆ ಪುರಂದರ ದಾಸರು.
ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ